ಪ್ರಿನ್ಸೆಪ್, ಜೇಮ್ಸ್
 	1799-1840. ನಾಣ್ಯಶಾಸ್ತ್ರ ಶಾಸನಶಾಸ್ತ್ರ ಇತಿಹಾಸಗಳ ತಜ್ಞ. 1799ರ ಆಗಸ್ಟ್ 20ರಂದು ಜಾನ್ ಪ್ರಿನ್ಸೆಪರ ಏಳನೆಯ ಪುತ್ರನಾಗಿ ಜನಿಸಿದ. ಜಾನ್ ಪ್ರಿನ್ಸೆಪ್ ಲಂಡನ್ ನಗರದ ಆಲ್ಡರ್‍ಮನ್ನನೂ ಕ್ವೀನ್ಸ್‍ಬರೊ ಕ್ಷೇತ್ರದಿಂದ ಪಾರ್ಲಿಮೆಂಟ್ ಸದಸ್ಯನೂ ಆಗಿದ್ದವ. ಈತ ಭಾರತದಲ್ಲಿದ್ದು ವಿಶೇಷ ಸಂಪತ್ತನ್ನು ಶೇಖರಿಸಿದ್ದನಲ್ಲದೆ ವಿಶೇಷ ಪ್ರಭಾವಶಾಲಿಯಾಗಿದ್ದ. ಈ ಪ್ರಭಾವದಿಂದಾಗಿ ಜೇಮ್ಸನೂ ಸೇರಿದಂತೆ ಜಾನನ ಏಳ್ವರು ಮಕ್ಕಳೂ ಭಾರತದಲ್ಲಿ ಉದ್ಯೋಗ ಸಂಪಾದಿಸಿಕೊಂಡರು.

	ಜೇಮ್ಸ್ ಬಾಲ್ಯದಿಂದಲೂ ತುಂಬ ಚುರುಕಾಗಿದ್ದ. ಕ್ಲಿಫ್ಟನ್‍ನಲ್ಲಿ ಎರಡು ವರ್ಷ ವಿದ್ಯಾಭ್ಯಾಸ ಆದ ಮೇಲೆ ಇವನ ವ್ಯಾಸಂಗ ಮನೆಯಲ್ಲಿ ಮುಂದುವರಿಯಿತು. ಈ ಸಮಯದಲ್ಲಿ ಆತ ಸಂಗೀತದಲ್ಲಿ ಅಭಿರುಚಿಯನ್ನು ಬೆಳೆಸಿಕೊಂಡ. ಮುಂದೆ ಅದನ್ನು ಚೆನ್ನಾಗಿ ಸಾಧಿಸಿದ. ಹದಿನೈದನೆಯ ವಯಸ್ಸಿನಲ್ಲಿ ಜೇಮ್ಸ್ ಪುಗಿನ್ ಎಂಬವನ ಬಳಿಯಲ್ಲಿ ವಾಸ್ತುಶಿಲ್ಪದ ಅಭ್ಯಾಸಿಯಾಗಿ ಸೇರಿದ. ಆದರೆ ಪ್ರಯೋಗಶಾಲೆಯಲ್ಲಿ ಕಣ್ಣುಗಳಿಗೆ ಗಾಯಗಳಾದುದರಿಂದ ಈ ಅಭ್ಯಾಸ ಯಶಸ್ವಿಯಾಗಲಿಲ್ಲ. ಸ್ವಲ್ಪಕಾಲ ನಿರುದ್ಯೋಗಿಯಾಗಿದ್ದ. ಆಮೇಲೆ ಲೋಹಪರೀಕ್ಷಕ ಮಾರ್ಸೆಟ್ಟನ ಬಳಿ ಅಧ್ಯಯನದ ಮಾಡಿ ಕಲ್ಕತ್ತದಲ್ಲಿ ಈಸ್ಟ್ ಇಂಡಿಯ ಕಂಪನಿಯ ಟಂಕಸಾಲೆಯ ಮುಖ್ಯ ನಾಣ್ಯ ಪರೀಕ್ಷಣಾಧಿಕಾರಿಯಾಗಿದ್ದ ಸಹಾಯಕನಾಗಿ ನೇಮಕಗೊಂಡ (1819). ಇವನ ಮೇಲಧಿಕಾರಿಯಾಗಿದ್ದ ಎಚ್. ಎಚ್. ಕಿಲ್ಸನ್ ವಿದ್ವಾಂಸನೂ ಸಾಹಿತ್ಯಜ್ಞನೂ ಆಗಿದ್ದ. ಜೇಮ್ಸ್ ಅವನಿಂದ ಬಹಳ ಪ್ರಭಾವಿತನಾದ. ವಾರಾಣಸಿಯ ಟಂಕಸಾಲೆಯನ್ನು ನವೀಕರಿಸಲು ವಿಲ್ಸನ್ ಅಲ್ಲಿಗೆ ವರ್ಗವಾದಾಗ ಜೇಮ್ಸ್ ಕಲ್ಕತ್ತೆಯ ಟಂಕಸಾಲೆಯ ನಾಣ್ಯ ಪರೀಕ್ಷಣಾಧಿಕಾರಿಯ ಹೊಣೆಯನ್ನು ನಿರ್ವಹಿಸಿದ. ಸ್ವಲ್ಪಕಾಲದ ಮೇಲೆ ಜೇಮ್ಸ್ ವಾರಾಣಸಿಯ ಟಂಕಸಾಲೆಯ ಮುಖ್ಯ ನಾಣ್ಯಪರೀಕ್ಷಣಾಧಿಕಾರಿಯಾಗಿ ನೇಮಕಗೊಂಡ (1820). ಜೇಮ್ಸ್ ವಾರಾಣಸಿಗೆ ಗಂಗಾನದಿಯ ಮೇಲೆ ನಾವೆಯಲ್ಲಿ ಪ್ರಯಾಣ ಮಾಡುತ್ತಿದ್ದಾಗ ನದಿಯ ಎಡಬಲಗಳ ಸೌಂದರ್ಯ ಇವನ ಮನಸ್ಸನ್ನು ಸೆಳೆಯಿತು. ಇವನು ಸೀಸದ ಕಡ್ಡಿಯಲ್ಲಿ ಆ ದೃಶ್ಯಗಳ ರೇಖಾಚಿತ್ರಗಳನ್ನು ರಚಿಸಿದ. ಜೇಮ್ಸ್ ವಾರಾಣಸಿಗೆ ಬಂದಾಗ ಅಲ್ಲಿ ನಿರ್ಮಿತವಾಗಲಿದ್ದ ಟಂಕಸಾಲೆಯ ಕಟ್ಟಡವನ್ನು ಅವರು ಅಂದಾಜು ಮಾಡಿದ್ದ ಖರ್ಚಿನಲ್ಲೇ ಇನ್ನೂ ಸುಂದರವಾಗಿ ಕಟ್ಟಬಹುದೆಂದು ಹೊಸ ಆಲೇಖ್ಯವನ್ನು ಬರೆದು ಅದನ್ನು ಕಲ್ಕತ್ತದಲ್ಲಿದ್ದ ಕಂಪನಿಯ ಮಿಲಿಟರಿ ಮಂಡಲಿಗೆ ಕಳಿಸಿದ. ಮಂಡಲಿ ಅದಕ್ಕೆ ಮಂಜೂರಾತಿ ನೀಡಿತು. ಆ ಕಟ್ಟಡದಿಂದ ಆತನಿಗೆ ಪ್ರಶಂಸೆ ಬಂತು. ಅದೊಂದು ವಿಶಿಷ್ಟ ಮಾದರಿಯಾಗಿ ಪರಿಣಮಿಸಿತು. ಅವನು ವಾರಾಣಸಿಯಲ್ಲಿ ಇನ್ನೂ ಕೆಲವು ನಿರ್ಮಾಣಗಳ ಹೊಣೆ ವಹಿಸಿಕೊಂಡ. ಜೇಮ್ಸ್ 1835ರಲ್ಲಿ ಕರ್ನಲ್ ಆಬರ್ಟನ ಪುತ್ರಿ ಹ್ಯಾರಿಟ್ಟಳನ್ನು ಮದುವೆಯಾದ. 1840ರಲ್ಲಿ ಹೆರ್ ಫರ್ಡ್‍ಷರ್‍ನಲ್ಲಿ ಮೆದುಳಿನ ಬೇನೆಯಿಂದ ನಿಧನಹೊಂದಿದ (22-4-1840)

	ಭಾರತದಲ್ಲಿ ಅಧಿಕಾರಿಯಾಗಿದ್ದಾಗ ಜೇಮ್ಸ್ ಬಿಡುವಿನ ವೇಳೆಯಲ್ಲಿ ಸಾಹಿತ್ಯ ಹಾಗೂ ವಿಜ್ಞಾನ ವಿಷಯಗಳ ಅಧ್ಯಯನ ಮಾಡುತ್ತ ಅವನ್ನು ಕುರಿತು ಬರೆವಣಿಗೆಯಲ್ಲಿ ನಿರತನಾಗಿದ್ದ. ಈತನ ಅಧ್ಯಯನದ ವ್ಯಾಪ್ತಿ ವಿಸ್ತಾರವಾದ್ದಾಗಿತ್ತು. ರಸಾಯನವಿಜ್ಞಾನ, ಖನಿಜವಿಜ್ಞಾನ, ಪವನಶಾಸ್ತ್ರ. ನಾಣ್ಯಶಾಸ್ತ್ರ, ಪುರಾತನ ವಸ್ತುಗಳು ಮುಂತಾದವುಗಳಲ್ಲಿ ಇವನು ಆಸಕ್ತಿ ಹೊಂದಿದ್ದ. ಜೇಮ್ಸ್ ವ್ಯೂಸ್ ಅಂಡ್ ಇಲ್‍ಸ್ಟ್ರೇಷನ್ಸ್ ಆಫ್ ಬೆನಾರಿಸ್ ಎಂಬ ಪುಸ್ತಕವನ್ನು (1825) ಪ್ರಕಟಿಸಿದನಲ್ಲದೆ ಅನೇಕ ಲೇಖನಗಳನ್ನು ಬರೆದ. ಗ್ಲೀನಿಂಗ್ಸ್ ಆಫ್ ಸೈನ್ಸ್ ಎಂಬ ಪ್ರತಿಕೆಯ ಲೇಖಕನಾಗಿಯೂ ಸಂಪಾದಕನಾಗಿಯೂ ಕೆಲಸ ಮಾಡಿದ. ಈ ಪತ್ರಿಕೆಯೇ ಮುಂದೆ ಜರ್ನಲ್ ಆಫ್ ದಿ ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಆಯಿತು. ಜೇಮ್ಸ್‍ನ ಪ್ರಸಿದ್ಧ ಲೇಖನಗಳ ಪೈಕಿ ಅಶೋಕನ ಶಾಸನಗಳನ್ನು ಕುರಿತದ್ದು ಒಂದು. ಇವನು ದೆಹಲಿ ಮತ್ತು ಅಲಹಾಬಾದ್ ಸ್ತಂಭಶಾಸನಗಳನ್ನು ಓದಿ ವಿವರಿಸಿದ. ಕಂಪನಿಯ ರೂಪಾಯಿ ನಾಣ್ಯವನ್ನು ಶಿಷ್ಟೀಕರಿಸಲು ಜೇಮ್ಸ್ ಕೆಲವು ಯೋಜನೆಗಳನ್ನು ಜಾರಿಗೆ ತಂದ. ಎಡ್ವರ್ಡ್ ಥಾಮಸನ ಸಂಪಾದಕತ್ವದಲ್ಲಿ ಈತನ ಲೇಖನಗಳು 1858ರಲ್ಲಿ ಪ್ರಕಟವಾದವು. ಜೇಮ್ಸ್ ರಾಯಲ್ ಸೊಸೈಟಿಯ ಫೆಲೊ ಆಗಿದ್ದ. ಈತನ ನೆನಪಿಗಾಗಿ ಕಲ್ಕತ್ತೆಯ ಪೌರರು ಫೋರ್ಟ್ ವಿಲಿಯಮ್ ಬಳಿ ಪ್ರಿನ್ಸೆಪ್ ಘಾಟ್ ನಿರ್ಮಿಸಿದ್ದು ಈಗಲೂ ಇದೆ.
(ಎಸ್.ಎಸ್.ಜಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ